ಜಲಿಯನ್ ವಾಲಾಬಾಗ್ ಹತ್ಯಾಕಾಂಡ : ಭಾರತೀಯ ಸ್ವಾತಂತ್ರ್ಯ ಚಳವಳಿಯ ಇತಿಹಾಸದಲ್ಲಿ ಅತ್ಯಂತ ರಕ್ತಸಿಕ್ತ ದಿನವಾಗಿದೆ....
ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ಭಾರತೀಯರು ಎಂದಿಗೂ ಮರೆಯಲು ಸಾಧ್ಯವಿಲ್ಲ ಏಕೆಂದರೆ, ಇದು ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಡೆದ ಅತ್ಯಂತ ದುರದೃಷ್ಟಕರ ಘಟನೆಯಾಗಿದೆ. ಜಲಿಯನ್ ವಾಲಾ ಬಾಗ್ ಉತ್ತರ ಭಾರತದ ನಗರವಾದ ಅಮೃತಸರದಲ್ಲಿರುವ ಒಂದು ಉದ್ಯಾನವಾಗಿದೆ. ಏಪ್ರಿಲ್ 13, 1919 ರಂದು, ಜನರಲ್ ಡೈಯರ್ ನೇತೃತ್ವದ ಬ್ರಿಟಿಷ್ ಸೈನಿಕರು ಈ ಉದ್ಯಾನದಲ್ಲಿ ನೆರೆದಿದ್ದ ನಿರಾಯುಧ ಪುರುಷರು, ಮಹಿಳೆಯರು ಮತ್ತು ಮಕ್ಕಳ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದರು.
ಹತ್ತು ನಿಮಿಷಗಳ ಕಾಲ ನಡೆದ ಗುಂಡಿನ ದಾಳಿಯಲ್ಲಿ 1650 ಸುತ್ತು ಗುಂಡು ಹಾರಿಸಲಾಯಿತು. ಆಗಿನ ಬ್ರಿಟೀಷ್ ಸರ್ಕಾರದ ಪ್ರಕಾರ 379 ಜನರು ಹುತಾತ್ಮರಾದರು ಎನ್ನಲಾಗಿದೆ. ಆದರೆ ಇತರ ಅಂಕಿಅಂಶಗಳ ಪ್ರಕಾರ, 1000 ಕ್ಕೂ ಹೆಚ್ಚು ಜನರು ಅಲ್ಲಿ ಮೃತಪಟ್ಟದ್ದು, 2000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಈ ದುರಂತದಲ್ಲಿ ಮಡಿದವರ ಸ್ಮರಣಾರ್ಥ 1951 ರಲ್ಲಿ ಸ್ಮಾರಕವನ್ನು ನಿರ್ಮಿಸಲಾಯಿತು. ಈ ಸ್ಮಾರಕವು ರಾಷ್ಟ್ರೀಯ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಅಮೃತ್ ಸರ್ ಹತ್ಯಾಕಾಂಡ ಎಂದೇ ಖ್ಯಾತವಾಗಿರುವ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಇಂದಿಗೆ 104 ವರ್ಷಗಳನ್ನು ಪೂರೈಸಿದೆ.
ಮಾರ್ಚ್ 10, 1919 ರಂದು, ಬ್ರಿಟಿಷ್ ಆಡಳಿತವು ರೌಲಟ್ ಆಕ್ಟ್ (ಕಪ್ಪು ಕಾಯಿದೆ)ನ್ನು ಅಂಗೀಕರಿಸಿತು, ಇದು ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಯಾವುದೇ ವ್ಯಕ್ತಿಯನ್ನು ವಿಚಾರಣೆಯಿಲ್ಲದೆ ಬಂಧಿಸಲು ಸರ್ಕಾರಕ್ಕೆ ಅಧಿಕಾರ ನೀಡಿತು. ಈ ನಿಯಮವು ಭಾರತೀಯರಲ್ಲಿ ಅಸಮಾಧಾನಕ್ಕೆ ಕಾರಣವಾಯಿತು. ಮಹಾತ್ಮ ಗಾಂಧಿಯವರು ರೌಲತ್ ಕಾಯಿದೆಯ ವಿರುದ್ಧ ಸತ್ಯಾಗ್ರಹ ಚಳವಳಿಯನ್ನು ಆರಂಭಿಸಿದರು. ಏಪ್ರಿಲ್ 7, 1919 ರಂದು, ಗಾಂಧಿಯವರು ಸತ್ಯಾಗ್ರಹಿ ಎಂಬ ಪ್ರಬಂಧವನ್ನು ಪ್ರಕಟಿಸಿದರು, ದಬ್ಬಾಳಿಕೆಯ ಆಡಳಿತವನ್ನು ವಿರೋಧಿಸುವ ಮಾರ್ಗಗಳನ್ನು ವಿವರಿಸಿದರು.
ಇಬ್ಬರು ಪ್ರಸಿದ್ಧ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಾದ ಸೈಫುದ್ದೀನ್ ಕಿಚ್ಲು ಮತ್ತು ಸತ್ಯಪಾಲ್ ಕೂಡ ರೌಲತ್ ಕಾಯಿದೆಯ ವಿರುದ್ಧ ಅಮೃತ್ ಸರ್ ಶಾಂತಿಯುತ ಪ್ರತಿಭಟನೆಯನ್ನು ಆಯೋಜಿಸಿದರು.
1919ರ ಏಪ್ರಿಲ್ 9ರಂದು ಶ್ರೀರಾಮನವಮಿಯಂದು ಈ ಇಬ್ಬರನ್ನೂ ಬಂಧಿಸುವಂತೆ ಆದೇಶ ಹೊರಡಿಸಲಾಯಿತು. ಅವರನ್ನು 10 ಏಪ್ರಿಲ್ 1919 ರಂದು ಬಂಧಿಸಲಾಯಿತು. ಪ್ರತಿಭಟನೆಗಳಿಗೆ ಪ್ರತಿಕ್ರಿಯೆಯಾಗಿ, ಬ್ರಿಟಿಷರು ಸಾರ್ವಜನಿಕ ಸಭೆಗಳನ್ನು ನಿಷೇಧಿಸಿದರು. ಈ ಆದೇಶದ ಅರಿವಿಲ್ಲದೆ, ಸಾವಿರಾರು ನಿರಾಯುಧ ಭಾರತೀಯರು ಬೈಸಾಖಿ ಹಬ್ಬವನ್ನು ಆಚರಿಸಲು ಒಗ್ಗೂಡಿದರು. ಇದೇ ವೇಳೆ ಇಬ್ಬರು ನಾಯಕರ ಬಂಧನ ವಿರೋಧಿಸಿ ಜಲಿಯನ್ ವಾಲಾಬಾಗ್ ನಲ್ಲಿ ಪ್ರತಿಭಟನೆ ನಡೆಸಲಾಯಿತು. ನಾಗರಿಕರನ್ನು ಶಿಕ್ಷಿಸುವ ದೃಷ್ಟಿಯಿಂದ, ಬ್ರಿಗೇಡಿಯರ್-ಜನರಲ್ ರೆಜಿನಾಲ್ಡ್ ಡೈಯರ್ ಜಲಿಯನ್ ವಾಲಾ ಬಾಗ್ ತಲುಪಿದರು ಮತ್ತು ಯಾರೂ ತಪ್ಪಿಸಿಕೊಳ್ಳದಂತೆ ರಸ್ತೆಗಳನ್ನು ಮುಚ್ಚಿದರು. ಆನಂತರ ಸಾವಿರಾರು ನಿರಾಯುಧ ನಾಗರಿಕರ ಗುಂಪಿನ ಮೇಲೆ ಗುಂಡು ಹಾರಿಸಲು ಸೈನ್ಯಗಳಿಗೆ ಆದೇಶ ನೀಡಲಾಯಿತು. ಯಾವುದೇ ಎಚ್ಚರಿಕೆ ನೀಡದೆ, ಸೈನಿಕರು ಗುಂಪಿನ ಮೇಲೆ ಗುಂಡು ಹಾರಿಸಿದರು ಮತ್ತು ಮದ್ದುಗುಂಡುಗಳು ಖಾಲಿಯಾಗುವವರೆಗೂ ಗುಂಡಿನ ದಾಳಿಯನ್ನು ಮುಂದುವರೆಸಿದರು. 1,650 ಸುತ್ತು ಗುಂಡುಗಳು ನೆರೆದವರ ಮೇಲೆ ಎರಗಿದವು.
ಬ್ರಿಟಿಷರು ಮನಬಂದಂತೆ ಗುಂಡು ಹಾರಿಸುತ್ತಿದ್ದಂತೆ ಹಲವರು ‘ಇಂಕ್ವಿಲಾಬ್ ಜಿಂದಾಬಾದ್’ ಎಂದು ಘೋಷಣೆ ಕೂಗಿ ಬಾವಿಗೆ ಹಾರಿದರು. ಗುಂಡಿನ ದಾಳಿಯ ನಂತರ 200 ಕ್ಕೂ ಹೆಚ್ಚು ಮೃತ ದೇಹಗಳನ್ನು ಬಾವಿಯಿಂದ ಹೊರತೆಗೆಯಲಾಯಿತು. ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಇಂದಿಗೂ ಭಾರತದ ಇತಿಹಾಸದಲ್ಲಿ ಕರಾಳ ದಿನವಾಗಿ ಉಳಿದಿದೆ.ಈ ದಿನದಂದು ಮರಣ ಹುತಾತ್ಮರಾದವರಿಗೆ ಅನಂತಕೋಟಿ ನಮನಗಳನ್ನು ಸಲ್ಲಿಸೋಣ.
Tags
ಮಾಹಿತಿ